ಯೋಜನೆಗಳು
ಸಮುದಾಯವೊಂದು ಮುಂದುವರೆಯಲು, ಹೆಚ್ಚಿನದನ್ನು ಸಾಧಿಸಲು “ವಿಜ್ಞಾನ”ದ ಅರಿವು ಗಟ್ಟಿ ಅಡಿಪಾಯವನ್ನು ಒದಗಿಸುತ್ತದೆ. “ವಿಜ್ಞಾನ” ಎಂಬುದು ಶಾಲೆಯಲ್ಲಿ ಕಲಿಸುವ ಬರೀ ಒಂದು “ಪಠ್ಯಪುಸ್ತಕ” ವಿಷಯವಾಗಿರದೇ, ನಮ್ಮ ಸುತ್ತಲಿನ ಆಗುಹೋಗುಗಳ ಕುರಿತು ಆಳವಾಗಿ ತಿಳಿದುಕೊಳ್ಳುವ, ಕಂಡದ್ದನ್ನು ಒರೆಗೆಹಚ್ಚುವ ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನ ಹಲವು ಸಮುದಾಯಗಳು ತಮ್ಮ ತಾಯ್ನುಡಿಯಲ್ಲಿ ವಿಜ್ಞಾನ ಅರಿತುಕೊಳ್ಳುವ ಗಟ್ಟಿ ವ್ಯವಸ್ಥೆಯನ್ನು ಕಟ್ಟಿಕೊಂಡಿವೆ. ಫ್ರೆಂಚ್, ಜರ್ಮನ್, ಇಂಗ್ಲೀಶ್, ಪಿನ್ನಿಶ್, ಜಾಪನೀಸ್, ಕೊರಿಯನ್ ಮುಂತಾದ ನುಡಿಗಳು ತಮ್ಮ ಸಮುದಾಯದಲ್ಲಿ ವಿಜ್ಞಾನದ ಅರಿವನ್ನು ಪಸರಿಸುವಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸಿವೆ. ಆಯಾ ಸಮುದಾಯಗಳು ಕಟ್ಟಿದ ದೇಶಗಳು “ಮುಂದುವರೆದ ದೇಶಗಳು” ಎನ್ನಿಸಿಕೊಳ್ಳಲು ತಾಯ್ನುಡಿ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಯೇ ಕಾರಣವಾಗಿದೆ. ಕನ್ನಡಿಗರು ನಿಜವಾಗಿ ಮುಂದುವರೆದ ಸಮುದಾಯದ ಸಾಲಿಗೆ ಸೇರಬೇಕೆಂದರೆ, ಎಲ್ಲ ಬಗೆಯ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆ ಕನ್ನಡದಲ್ಲಿ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು, ಹಲವು ಕೆಲಸಗಳನ್ನು ಕನ್ನಡ ನುಡಿ ಸಮುದಾಯ ಎಡೆಬಿಡದೇ ಮಾಡಬೇಕಿದೆ.
ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವ ಗುರಿಯನ್ನಿಟ್ಟುಕೊಂಡು ಮುನ್ನೋಟ ಟ್ರಸ್ಟ್ ಹಲವು ಯೋಜನೆಗಳನ್ನು ಮುನ್ನಡೆಸುತ್ತಿದೆ. ಇಂತಹ ಕೆಲವು ಯೋಜನೆಗಳ ಪರಿಚಯ ಇಲ್ಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಪದಗಳ ಕಟ್ಟಣೆ:

ಕನ್ನಡದಲ್ಲಿ ವಿಜ್ಞಾನದ ಬರವಣಿಗೆ ಅಂದೊಡನೆ ಮೊದಲು ಎದುರಾಗುವುದು ಟೆಕ್ನಿಕಲ್ ಪದಗಳ ಸವಾಲು. ಪದಗಳು ಒಂದೋ ಸಿಗುವುದಿಲ್ಲ ಇಲ್ಲವೇ ತುಂಬಾ ಕಷ್ಟವಾದ ಪದಗಳನ್ನು ಬಳಸಲಾಗುತ್ತಿದೆ. ಕನ್ನಡದ ಮೂಲಕ ತುಂಬಾ ಸುಲಭವಾಗಬೇಕಿದ್ದ ವಿಜ್ಞಾನದ ಕಲಿಕೆ ಹಲವಾರು ಕಡೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. “ಅರಿಮೆಯ ಪದಗಳು” ಯೋಜನೆಯಡಿಯಲ್ಲಿ ಕನ್ನಡದಲ್ಲಿ ಸುಲಭವಾದ ವಿಜ್ಞಾನದ ಮತ್ತು ತಂತ್ರಜ್ಞಾನ ಪದಗಳನ್ನು, ಸಮುದಾಯ ಪಾಲ್ಗೊಳ್ಳುವಿಕೆಯ ಮೂಲಕ ಕಟ್ಟಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಹೀಗೆ ಕಟ್ಟಿದ ಪದಪಟ್ಟಿಗಳನ್ನು ಇಲ್ಲಿ (http://arime.org//category/ಪದಪಟ್ಟಿಗಳು/) ನೋಡಬಹದು.
ಅರಿಮೆ ಮುನ್ನೋಟ ಮಾತುಕತೆಗಳು:

ಹಲವಾರು ಕನ್ನಡಿಗರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.ಅವರ ಅನುಭವ, ಕಲಿಕೆ, ತಿಳುವಳಿಕೆಯನ್ನು ಕನ್ನಡದಲ್ಲಿ ಹಂಚಿಕೊಳ್ಳಲು ವೇದಿಕೆಯನ್ನು ಈ ಯೋಜನೆಯ ಮೂಲಕ ಒದಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ತಿಂಗಳಿಗೊಂದು ಮಾತುಕತೆಯನ್ನು ನಡೆಸಲಾಗುತ್ತಿದ್ದು, ಕಳೆದ ನಾಲ್ಕು ವರುಶಗಳಲ್ಲಿ ಸುಮಾರು ೫೦ ಮಾತುಕತೆಗಳನ್ನು ನಡೆಸಲಾಗಿದೆ. ಈ ಯೋಜನೆಯ ಇನ್ನೊಂದು ಸಾಧನೆಯೆಂದರೆ ಕನ್ನಡದಲ್ಲಿ ಮೊದಲ ಬಾರಿಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳಲು ಮುಂದಾದ ಹಲವು ಹೊಸ ಮಾತುಗಾರರನ್ನು ಮುನ್ನೆಲೆಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ನಡೆದ ಮಾತುಕತೆಗಳ ಕಿರುನೋಟವನ್ನು ಕೆಳಗೆ ನೋಡಬಹುದು.
ವಿಜ್ಞಾನ ಮತ್ತು ತಂತ್ರಜ್ಞಾನದ ವೆಬ್ ಸೈಟ್:

“ಅರಿಮೆ” ಎಂಬ ಮಿಂದಾಣವನ್ನು ಇದಕ್ಕಾಗಿ ನಡೆಸುತ್ತಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದ ಹಲವು ಬರಹಗಳನ್ನು ಈ ತಾಣದಲ್ಲಿ ಮೂಡಿಸಲಾಗುತ್ತಿದೆ. ವಿಜ್ಞಾನದ ಆಸಕ್ತ ಬರಹಗಾರರಿಗೆ ಇದೊಂದು ವೇದಿಕೆಯಾಗಿದ್ದು, ಹೊಸ ಬರಹಗಾರರು ಹೊಮ್ಮಲು ಅನುವು ಮಾಡಿಕೊಡುತ್ತಿದೆ.
“ಅರಿಮೆಯ ಅಧ್ಯಯನ” ಯೋಜನೆ: ವಿಜ್ಞಾನ ಕಲಿಕೆಯ ಸರಿಯಾದ ವಿಧಾನ ಯಾವುದು? ಮುಂದುವರೆದ ದೇಶಗಳು ತಮ್ಮ ನುಡಿಯಲ್ಲಿ ವಿಜ್ಞಾವನ್ನು ಹೇಗೆ ಕಟ್ಟಿಕೊಂಡವು? ಶಾಲಾ ಪಠ್ಯಪುಸ್ತಕಗಳಲ್ಲಿ ವಿಜ್ಞಾನದ ಕಲಿಕೆಯನ್ನು ಹೇಗೆ ಅಳವಡಿಸಲಾಗಿದೆ, ಅಲ್ಲಿ ಇರಬಹುದಾದ ಕೊರತೆಗಳಾವವು? ಅವುಗಳನ್ನು ಬಗೆಹರಿಸುವ ಪರಿಹಾರಗಳು ಯಾವವು? ಹೀಗೆ ವಿಜ್ಞಾನ ಕಲಿಕೆಯ ಕುರಿತು ಇರುವ ವ್ಯವಸ್ಥೆಗಳ ಅಧ್ಯಯನ ನಡೆಸುವುದು ಈ ಯೋಜನೆಯ ಗುರಿ. ಈ ಯೋಜನೆಯಡಿಯಲ್ಲಿ ಕೈಗೊಂಡ “ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪದಗಳ ಬಳಕೆ” , “ಮಕ್ಕಳಲ್ಲಿ ವಿಜ್ಞಾನದಲ್ಲಿ ಒಲವು ಮೂಡಿಸುವುದು ಹೇಗೆ? – ಒಂದು ಅನುಭವ” ಎಂಬ ಅಧ್ಯಯನಗಳನ್ನು ಇಲ್ಲಿ (http://arime.org//category/ಅರಕೆಗಳು/) ನೋಡಬಹುದು.
ವಿಜ್ಞಾನ ಕಮ್ಮಟಗಳು:

ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಲು ಈ ಯೋಜನೆಯಡಿಯಲ್ಲಿ ಕಮ್ಮಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಡಿಯನ್ ಅಕಾಡಮಿ ಆಪ್ ಸೈನ್ಸ್ ಜತೆ ಒಡಗೂಡಿ ಶಾಲಾ ಮಕ್ಕಳಿಗಾಗಿ ನಡೆಸಿದ ಇಂತಹ ಒಂದು ಕಮ್ಮಟ “ಅರಿವಿನ ಅಂಗಳ”. ಒಂದು ದಿನದ ಈ ಕಮ್ಮಟದಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ, ಆಟಗಳ ಮೂಲಕ ವಿಜ್ಞಾನದ ಬಗ್ಗೆ ತಿಳಿಸಿಕೊಡಲಾಗುತ್ತದೆ.
ಇಗೋ ವಿಜ್ಞಾನ:

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತು ಬರೆಯುವ ಬರಹಗಾರರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಇಗೋ ವಿಜ್ಞಾನ ಎಂಬ ಪೈಪೋಟಿಯನ್ನು ನಡೆಸಲಾಗುತ್ತಿದೆ. ಈ ಯೋಜನೆಯ ಮೊದಲ ಕಂತಿನಲ್ಲಿ ನಾಡಿನೆಲ್ಲೆಡೆಯಿಂದ ಸುಮಾರು ೧೨೦ ಬರಹಗಾರರು ಪಾಲ್ಗೊಂಡಿದ್ದರು.
ತಿಳಿ ಯುಟ್ಯೂಬ್ ಚಾನಲ್:

ವಿಜ್ಞಾನದ ತಿಳುವಳಿಕೆ ಪಸರಿಸುವಲ್ಲಿ ವಿಡಿಯೋ ಮಾಧ್ಯಮ ತುಂಬಾ ಮುಖ್ಯವಾದ ಸಲಕರಣೆ. ಹಾಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಡಿಯೋಗಳಿಗೆ ಮೀಸಲಾದ, “ತಿಳಿ” ಎಂಬ ಯುಟ್ಯೂಬ್ ಚಾನಲ್ ವೊಂದನ್ನು ಮುನ್ನೋಟ ಟ್ರಸ್ಟ್ ನಡೆಸುತ್ತಿದೆ. ಈ ತಾಣದಲ್ಲಿ ಆಗಾಗ್ಗೆ ಒಳ್ಳೆಯ ಗುಣಮಟ್ಟದ ವಿಡಿಯೋಗಳನ್ನು ಹೊಮ್ಮಿಸಲಾಗುತ್ತಿದೆ.
https://www.youtube.com/channel/UCJ9n_eab3VgrmRxe3eV17Kg
ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವನ್ನು ಹೊಮ್ಮಿಸುವ ಮುನ್ನೋಟ ಟ್ರಸ್ಟಿನ ಕೆಲಸಗಳಲ್ಲಿ ಕೈಜೋಡಿಸುವ ಆಸಕ್ತಿಯಿದ್ದವರೂ ನಮ್ಮನ್ನು ಖಂಡಿತಾ ಸಂಪರ್ಕಿಸಿ. Prashant@munnota.com
ಮುಂದುವರೆದ ದೇಶಗಳ ಪಟ್ಟಿಯನ್ನೊಮ್ಮೆ ನೋಡಿದರೆ ನಿಚ್ಚಳವಾಗಿ ಕಾಣುವ ವಿಷಯವೆಂದರೆ ಆ ಎಲ್ಲಾ ದೇಶಗಳಲ್ಲಿ ಒಟ್ಟಾರೆ ಕಲಿಕಾ ವ್ಯವಸ್ಥೆಯನ್ನು ತಾಯ್ನುಡಿ ಮೂಲಕ ಕಟ್ಟಿಕೊಂಡಿರುವುದು ಕಾಣಿಸುತ್ತದೆ. ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಫಿನ್ ಲ್ಯಾಂಡ್ ಮುಂತಾದ ದೇಶಗಳಲ್ಲಿ ಮೊದಲ ಹಂತದಿಂದ ಹಿಡಿದು ಮೇಲು ಹಂತದ ಕಲಿಕೆಯವರೆಗೂ ತಾಯ್ನುಡಿಯಲ್ಲಿ ಕಲಿಯಬಹುದು. ಅಂತಹ ಗಟ್ಟಿಯಾದ ಕಲಿಕಾ ವ್ಯವಸ್ಥೆಯನ್ನು ಆಯಾ ನುಡಿ ಸಮುದಾಯಗಳು ಕಟ್ಟಿಕೊಂಡಿವೆ.
“ತಾಯ್ನುಡಿಯಲ್ಲಿ ಕಲಿಕೆ, ಮಕ್ಕಳ ತಿಳುವಳಿಕೆಗೆ ಗಟ್ಟಿ ಅಡಿಪಾಯವನ್ನು ಹಾಕುತ್ತದೆ” ಎಂದು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ (ಕಲಿಕೆ, ವಿಜ್ಞಾನ ಮತ್ತು ಸಂಸ್ಕೃತಿ ಸಂಸ್ಥೆ)ತನ್ನ ವರದಿಯಲ್ಲಿ ತಿಳಿಸಿದೆ. ಜಗತ್ತಿನಲ್ಲೆಡೆ ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಯುನೆಸ್ಕೋ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.
ನಾಡಿನ ಕಲಿಕಾ ವ್ಯವಸ್ಥೆಯೇ ಕನ್ನಡಿಗರ ಏಳಿಗೆಗೆ ಅಡಿಪಾಯ. ಕನ್ನಡ ಮಾಧ್ಯಮದಲ್ಲಿ ಕಲಿಸುವ ಮೇರುಮಟ್ಟದ ಕಲಿಕಾ ವ್ಯವಸ್ಥೆಯಿದ್ದರಷ್ಟೇ ಕನ್ನಡಿಗರು ಏಳಿಗೆ ಸಾಧಿಸಲು ಸಾಧ್ಯ. ಕನ್ನಡ ನುಡಿ ಸಮುದಾಯ ಈ ವಿಷಯವನ್ನು ಸರಿಯಾಗಿ ಅರಿತು ಮುನ್ನಡೆಯಬೇಕಿದೆ.
ಕನ್ನಡ ಮಾಧ್ಯಮದ ಕಲಿಕಾ ವ್ಯವಸ್ಥೆ ಸುತ್ತ ಮುನ್ನೋಟ ಟ್ರಸ್ಟ್ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಂತಹ ಕೆಲವು ಯೋಜನೆಗಳ ಪರಿಚಯ ಇಲ್ಲಿದೆ.
ಶಾಲೆಗಳ ಮಾಹಿತಿ:

ಕನ್ನಡ ಮಾಧ್ಯಮದ ಮೂಲಕ ಕಲಿತರೆ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ ಅಂತಾ ಅರಿತಿರುವ ಹಲವಾರು ಪಾಲಕರು ನಮ್ಮ ನಡುವೆ ಇದ್ದಾರೆ. ಆದರೆ ಅವರಿಗೆ ಎದುರಾಗುವ ಒಂದು ದೊಡ್ಡ ಸಮಸ್ಯೆ ಎಂದರೆ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಕುರಿತ ಮಾಹಿತಿ. ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ನೀಗಿಸಲು ಮುನ್ನೋಟ ಟ್ರಸ್ಟ್ ಕನ್ನಡ ಮಾಧ್ಯಮ ಶಾಲೆಗಳ ಮಾಹಿತಿ ತಾಣವೊಂದನ್ನು ನಡೆಸುತ್ತಿದೆ. ಮುನ್ನೋಟ ತಂಡ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅರಿತುಕೊಂಡು, ಒಳ್ಳೆಯ ಗುಣಮಟ್ಟ ಹೊಂದಿರುವ ಶಾಲೆಗಳ ಮಾಹಿತಿಯನ್ನು ಈ ತಾಣದಲ್ಲಿ ಸೇರಿಸುತ್ತಿದೆ. ತಾಣದ ಕೊಂಡಿ ಇಲ್ಲಿದೆ:
ಕಲಿಕಾ ವ್ಯವಸ್ಥೆಯ ಅಧ್ಯಯನ:

ಕನ್ನಡ ಮಾಧ್ಯಮದ ಕಲಿಕೆಯನ್ನು ಗಟ್ಟಿಗೊಳಿಸಬೇಕೆಂದರೆ ಅಲ್ಲಿನ ಕುಂದುಕೊರತೆಗಳನ್ನು ಅರಿಯುವುದು ಮತ್ತು ಅವುಗಳಿಗೆ ಪರಿಹಾರ ಸೂಚಿಸುವ ಕೆಲಸ ತುಂಬಾ ಮುಖ್ಯ. ಈ ಕುರಿತು ಅಧ್ಯಯನಗಳನ್ನು ಕೈಗೊಳ್ಳುವುದು ಮುನ್ನೋಟ ಟ್ರಸ್ಟ್ ನ ಗುರಿಗಳಲ್ಲೊಂದು. “ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪದಗಳ ಬಳಕೆ” ಎಂಬ ಅಧ್ಯಯನ ಈ ನಿಟ್ಟಿನಲ್ಲಿ ನಡೆಸಿದ ಯೋಜನೆಗಳಿಗೆ ಉದಾಹರಣೆ. ಈ ಅಧ್ಯಯನದ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದು,
ಕಲಿಕೆಯ ಕಮ್ಮಟಗಳು:

ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗಾಗಿ ವಿಜ್ಞಾನ ಕಮ್ಮಟಗಳನ್ನು ಈ ಯೋಜನೆಡಯಲ್ಲಿ ನಡೆಸಲಾಗುತ್ತಿದೆ. ಮುನ್ನೋಟ ಟ್ರಸ್ಟ್ ತಂಡ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಮಕ್ಕಳು ಮತ್ತು ಶಿಕ್ಷಕರೊಂದಿಗೆ ನಡೆಸುವ ಕಾರ್ಯಕ್ರಮವಿದು. ಪುಸ್ತಕದಾಚೆಗೆ ಆಟ-ಮಾತುಕತೆಯ ಮೂಲಕ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನವಿದು.
ಇಂಡಿಯನ್ ಆಕಾಡಮಿ ಆಫ್ ಸೈನ್ಸ್ ನಂತಹ ಮೇರುಮಟ್ಟದ ಸಂಸ್ಥೆಗಳೊಂದಿಗೆ ಒಡಗೂಡಿ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ “ಅರಿವಿನ ಅಂಗಳ” ಎಂಬ ವಿಜ್ಞಾನ ಕಮ್ಮಟವನ್ನು ಮುನ್ನೋಟ ಟ್ರಸ್ಟ್ ನಡೆಸುತ್ತಿದೆ. ಈ ಯೋಜನೆಯ ಮೊದಲ ಕಾರ್ಯಕ್ರಮದ ಚಿತ್ರ ಇಲ್ಲಿದೆ. ಸುಮಾರು 10 ಕನ್ನಡ ಮಾಧ್ಯಮ ಶಾಲೆಗಳಿಂದ ಸುಮಾರು 40 ಶಾಲಾ ಮಕ್ಕಳು ಮತ್ತು ಶಿಕ್ಷಕರು ಇದರಲ್ಲಿ ಪಾಲ್ಗೊಂಡಿದ್ದರು.
ಶಾಲಾ ಮಕ್ಕಳಿಗೆ ಪುಸ್ತಕ ಹಂಚಿಕೆ ಯೋಜನೆ:

ಶಾಲಾ ಮಕ್ಕಳಿಗೆ ಕಲಿಕೆಯಲ್ಲಿ ಕುತೂಹಲ ಹುಟ್ಟಿಸುವ ಪುಸ್ತಕಗಳನ್ನು ದಾನಿಗಳ ನೆರವಿನಿಂದ ನೀಡುವ ಈ ಯೋಜನೆಯಡಿಯಲ್ಲಿ ವಿಜ್ಞಾನ ಪ್ರಯೋಗ ಪುಸ್ತಕಗಳು, ವಿಜ್ಞಾನಿಗಳ ಸಾಧನೆಗಳ ಬಗ್ಗೆ ಪರಿಚಯ ಮುಂತಾದ ಪುಸ್ತಕಗಳನ್ನು ಹಂಚಲಾಗುತ್ತದೆ.
ಮುನ್ನೋಟ ಟ್ರಸ್ಟಿನ ಕಲಿಕಾ ವ್ಯವಸ್ಥೆಯ ಈ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ನಿಮಗಿದ್ದರೆ ನಮ್ಮನ್ನು ಖಂಡಿತಾ ಸಂಪರ್ಕಿಸಿ.