ನಮ್ಮ ಬಗ್ಗೆ

ಕಳೆದ ಕೆಲ ದಶಕಗಳ ತಂತ್ರಜ್ಞಾನದ ಬಲದ ಮೇಲೆ ನೆಲೆ ನಿಂತಿರುವ ಜಾಗತೀಕರಣ ಬಹಳ ದೊಡ್ಡ ಮಟ್ಟದಲ್ಲಿ ಜಗತ್ತಿನ ಬಹುತೇಕ ಭಾಷೆಗಳ ಮುಂದೆ ಹೊಸ ಸಾಧ್ಯತೆಗಳನ್ನು, ಹೊಸ ಸವಾಲುಗಳನ್ನು ತಂದೊಡ್ಡಿದೆ. ಈ ಸಾಧ್ಯತೆಗಳನ್ನು ಬಳಸಿಕೊಳ್ಳುವ, ಸವಾಲುಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಯಾವ ಭಾಷಾ ಸಮುದಾಯ ಮಾಡಿದೆಯೋ ಅವರು ಜಾಗತೀಕರಣದ ಅಲೆಯಲ್ಲಿ ಕೊಚ್ಚಿ ಹೋಗದೆ, ಸಮರ್ಥವಾಗಿ ಅದನ್ನು ತಮ್ಮ ಅನುಕೂಲಕ್ಕೆ, ಏಳಿಗೆಗೆ ಬಳಸಿಕೊಂಡು ಮುಂದುವರೆಯುವ ಬೆಳವಣಿಗೆಯನ್ನು ನಾವು ನೋಡಬಹುದು. ಕಳೆದ ಇನ್ನೂರು ವರ್ಷಗಳ ಮನುಷ್ಯನ ಇತಿಹಾಸವನ್ನು ರೂಪಿಸಿದ್ದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಪಂಚದಲ್ಲಿ ಆದ ಬದಲಾವಣೆಗಳಾಗಿವೆ. ಈ ಬದಲಾವಣೆಗಳನ್ನು ರೂಪಿಸುವ ಶಕ್ತಿ ಪಡೆದ ಭಾಷೆಗಳು ಜಾಗತೀಕರಣದಲ್ಲಿ “ಕೊಡುವ” ಭಾಷೆಗಳಾಗಿದ್ದರೆ, ಉಳಿದ ಭಾಷೆಗಳು “ಪಡೆದುಕೊಳ್ಳುವ” ಭಾಷೆಗಳಾಗಿ ಉಳಿದಿವೆ.ಕನ್ನಡ ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ಬರಹದ ರೂಪದಲ್ಲಿ ಸಿಕ್ಕಿರುವ ಆಧಾರಗಳ ಮೇಲೆ ಅದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ನುಡಿ ಕಳೆದ ಎರಡು ಸಾವಿರ ವರ್ಷಗಳ ಅವಧಿಯ ಎಲ್ಲ ಸವಾಲುಗಳನ್ನು ದಾಟಿಕೊಂಡು ಉಳಿದು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟಿದೆ, ಆದರೆ ಜಾಗತೀಕರಣ ತಂದಿರುವ ಅತ್ಯಂತ ವೇಗದ ತಂತ್ರಜ್ಞಾನ ಮತ್ತು ವ್ಯಾಪಾರದ ಬದಲಾವಣೆಗಳು ಕನ್ನಡದ ಮುಂದೆ ಹಿಂದೆಂದೂ ಇರದ ಹಲವಾರು ಸವಾಲುಗಳನ್ನು ತಂದೊಡ್ಡುವ ಜೊತೆಗೆ ಕನ್ನಡವೊಂದು “ಪಡೆದುಕೊಳ್ಳುವ” ಭಾಷೆಯಾಗಿ ಉಳಿಯುವಂತೆ ಮಾಡಿದೆ. ಹೀಗೆ ಪಡೆದುಕೊಳ್ಳುವ ಮಟ್ಟದಲ್ಲಿ ಉಳಿದ ಕಾರಣದಿಂದಾಗಿಯೇ ಕನ್ನಡ ಕಲಿಕೆ, ದುಡಿಮೆಯ ವಿಷಯದಲ್ಲಿ ಸೊರಗುತ್ತಿದೆ. ಈ ಬದಲಾವಣೆಯನ್ನು ತಿಳಿದು, ಅದಕ್ಕೆ ತಕ್ಕ ದೂರಗಾಮಿ ನೆಲೆಯ ಕೆಲಸಗಳನ್ನು ಕನ್ನಡಿಗರು ಮಾಡುತ್ತ ಹೋದಲ್ಲಿ ಇಂದಲ್ಲದಿದ್ದರೂ ಕೆಲ ದಶಕಗಳಲ್ಲಿ ಕನ್ನಡವೂ ಒಂದು “ಕೊಡುವ” ಭಾಷೆಯಾಗಿ ಬದಲಾಗಬಹುದು. ಇದು ಆದಾಗ ಕನ್ನಡದಲ್ಲೂ ಪ್ರಪಂಚದ ಎಲ್ಲ ಅರಿವಿನ ಕವಲುಗಳನ್ನು ಕಟ್ಟುವುದು ಸಾಧ್ಯವಾಗಬಹುದು. ಇಂತಹದೊಂದು ಕನಸು ಈಡೇರಲು ಏನು ಬೇಕು ಅನ್ನುವ ಸುತ್ತ ಚಿಂತಿಸುವ, ಜಾಗೃತಿ ಮೂಡಿಸುವ, ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕೆಲಸ ಮಾಡುವ ವೃತ್ತಿಪರ ಕನ್ನಡಪರರು ಸೇರಿ ನಡೆಸುತ್ತಿರುವ ಒಂದು ಸಂಸ್ಥೆ “ಮುನ್ನೋಟ ಟ್ರಸ್ಟ್” ಆಗಿದೆ.

ನಮ್ಮ ಯೋಜನೆಗಳು

ಮುನ್ನೋಟ ಟ್ರಸ್ಟ್ ಮೂರು ಮುಖ್ಯ ಕವಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಅದರ ಸುತ್ತ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ:೧. ಹೊಸ ಜಗತ್ತಿನ ವಿಜ್ಞಾನ, ತಂತ್ರಜ್ಞಾನದ ಎಲ್ಲ ವಸ್ತು, ವಿಷಯಗಳನ್ನು ಕನ್ನಡದಲ್ಲೂ ಚರ್ಚಿಸುವ, ಮತ್ತು ಬರಹ, ಮಾತುಕತೆ, ಪುಸ್ತಕ, ಆಡಿಯೋ/ವಿಡಿಯೋ ರೂಪದಲ್ಲಿ ಪ್ರಕಟಿಸುವ ಮೂಲಕ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧ್ಯತೆಗಳನ್ನು ಹಿಗ್ಗಿಸುವತ್ತ ಶ್ರಮಿಸುವುದು೨. ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ತರಲು ಭಾಷೆಯನ್ನು ಸಜ್ಜುಗೊಳಿಸುವತ್ತ ಆಗಬೇಕಿರುವ ಪದ ಕಟ್ಟಣೆ, ನಿಘಂಟುಗಳ ಪ್ರಕಟಣೆ, ಅನುವಾದ, ಅದಕ್ಕೆ ಬೇಕಾದ ಪ್ರತಿಭೆಗಳನ್ನು ಸಜ್ಜುಗೊಳಿಸುವತ್ತ ದುಡಿಯುವುದು೩. ಅರಿವಿನ ಎಲ್ಲ ಕವಲುಗಳನ್ನು ಕನ್ನಡದಲ್ಲಿ ಕಟ್ಟುತ್ತ, ಶಿಕ್ಷಣದ ಮೂಲಕ ಅದನ್ನು ಪಸರಿಸುತ್ತ ಕನ್ನಡ ಸಮಾಜಕ್ಕೆ ತಲುಪಿಸುವ ಪ್ರಯತ್ನಗಳನ್ನು ಮಾಡುವುದು